ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರ , ಶಿರಳಗಿ , ಸಿದ್ಧಾಪುರ


ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಯವರು ನೆಲೆಸಿರುವ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರವು ಆಗಮಿಸುವ ಭಕ್ತರೆಲ್ಲರಿಗೂ ಜ್ಞಾನ ದಾರಿ ತೋರುವ ಆಶ್ರಮವಾಗಿದೆ. ಬ್ರಹ್ಮೀಭೂತರಾದ ಶ್ರೀ ರಾಜಾರಾಮ ಗುರೂಜಿಯವರು ಸ್ಥಾಪಿಸಿದ್ದ ಆಶ್ರಮವಿದು. ಸದಾ ರಾಮನಾಮ ಜಪದಲ್ಲಿ ತನ್ಮಯರಾಗಿರುತ್ತಿದ್ದ ಶ್ರೀ ರಾಜಾರಾಮ ಗುರೂಜಿಯವರು ಅಸಂಖ್ಯ ಭಕ್ತರಿಗೆ ಪ್ರೀತಿಯಿಂದ ಭಗವದ್-ಭಕ್ತಿಯ ಮಾರ್ಗ ತೋರಿದ ಗುರುಗಳು. ಅವರು ಹಾಕಿ ಕೊಟ್ಟ ಪರಂಪರೆಯಂತೆ, ಪ್ರತಿ ತಿಂಗಳ ಎರಡನೆಯ ರವಿವಾರ ಈಗಲೂ ಇಲ್ಲಿ ಸತ್ಸಂಗ, ಭಜನೆ, ನಡೆಯುತ್ತದೆ. ಭಕ್ತಿಯೋಗ, ಕರ್ಮಯೋಗ, ಹಾಗೂ ಜ್ಞಾನಯೋಗದ ಅಮೃತವನ್ನು ಆಗಮಿಸುವ ಶ್ರದ್ಧಾಳುಗಳಲ್ಲಿ ಹಂಚುವ ಸೇವೆ ಈ ದಿವ್ಯ ಕ್ಷೇತ್ರದಲ್ಲಿ ಸಾಗುತ್ತಿದೆ. ಬ್ರಹ್ಮೈಕ್ಯ ಶ್ರೀ ರಾಜಾರಾಮ ಗುರೂಜಿ, ಹಾಗೂ ಬ್ರಹ್ಮೈಕ್ಯ ಶ್ರೀ ಪರಮಾನಂದ ಭಾರತೀ ಸ್ವಾಮೀಜಿಯವರ ದಿವ್ಯಸಮಾಧಿಗಳೂ ಈ ಪವಿತ್ರ ಕ್ಷೇತ್ರದಲ್ಲಿವೆ. ಶ್ರದ್ಧಾವಂತರೆಲ್ಲರೂ ಸಂದರ್ಶಿಸಲೇಬೇಕಾದ ದಿವ್ಯತಾಣವಾಗಿದೆ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರ.



kshethra_image
god_image

ಪೂಜ್ಯ ಸ್ವಾಮೀಜಿಯವರ ಕಿರು ಪರಿಚಯ

ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಯವರು ಆಳವಾದ ಅಧ್ಯಯನ ಹಾಗೂ ನಿರಂತರ ತಪಸ್ಸಿನಲ್ಲಿ ತೊಡಗಿರುವ ಯೋಗಿಗಳು. ಅದ್ವೈತ ತತ್ತ್ವದಲ್ಲಿ ಅಪಾರ ಶ್ರದ್ಧೆ, ಸಾಧನೆ ಹಾಗೂ ಜ್ಞಾನವಿರುವ ಗುರುಗಳು. ತಮ್ಮ ವಿದ್ವತ್ಪೂರ್ಣ ಪ್ರವಚನ ಹಾಗೂ ವಾತ್ಸಲ್ಯದ ಮಾರ್ಗದರ್ಶನದಿಂದಾಗಿ ಈಗಾಗಲೇ ನಾಡಿನಾದ್ಯಂತ ಪರಿಚಿತರಾಗಿದ್ದರೆ. ಉಪನಿಷತ್, ಭಗವದ್ಗೀತೆ, ಶ್ರೀ ಶಂಕರಾಚಾರ್ಯರ ಬೋಧನೆಗಳು ಇತ್ಯಾದಿಗಳ ಕುರಿತಂತೆ ಅವರು ನಡೆಸುತ್ತಿರುವ ಸತ್ಸಂಗಗಳು ರಾಜ್ಯಾದ್ಯಂತ ಆಧ್ಯಾತ್ಮ ಸಾಧಕರನ್ನು ಈ ದಾರಿಯಲ್ಲಿ ಸಾಗಲು ಪ್ರೇರೇಪಿಸುತ್ತಿದೆ. ಬ್ರಹ್ಮೀಭೂತ ಶ್ರೀ ಪರಮಾನಂದ ಭಾರತೀ ಸ್ವಾಮೀಜಿಯವರ ಶಿಷ್ಯರಾಗಿರುವ ಅವರು, ಶ್ರೀ ಶಂಕರಾಚಾರ್ಯರು, ಶ್ರೀ ರಮಣರು, ಶ್ರೀ ಶ್ರೀಧರ ಸ್ವಾಮಿಗಳು ಇವರೆಲ್ಲರ ಗುರು ಪರಂಪರೆಯು ನೀಡಿದ ಜ್ಞಾನಸಾಗರದಲ್ಲಿ ಸದಾ ಅನುಸಂಧಾನ ನಡೆಯುತ್ತಿರುವ ಯೋಗಿಗಳು. ತಮ್ಮ ನಿರಂತರ ತಪಸ್ಸು, ಆಳವಾದ ಜ್ಞಾನ, ಪ್ರಶಾಂತತೆ, ಸುಮಧುರ ಹಾಗೂ ಸ್ಫುಟವಾದ ಕನ್ನಡ, ವಾತ್ಸಲ್ಯಪೂರ್ಣ ಧ್ವನಿ, ನಾಲಿಗೆಯಲ್ಲಿ ನಲಿಯುವ ಉಪನಿಷತ್ತು, ಭಗವದ್ಗೀತೆ ಹಾಗೂ ಮಂಕುತಿಮ್ಮನ ಕಗ್ಗದಂಥ ಚಿಂತನೆಗಳು - ಇವೆಲ್ಲವುಗಳಿಂದಾಗಿ, ಸ್ವಾಮೀಜಿಯವರ ಪ್ರವಚನ-ಸತ್ಸಂಗ ಕಾರ್ಯಕ್ರಮಗಳು ಈಗಾಗಲೇ ಲಕ್ಷಾಂತರ ಸಾಧಕರ ಮನೋಬುದ್ಧಿಯನ್ನು ತಟ್ಟಿವೆ. ಅವರು ಲೋಕಕಲ್ಯಾಣದ ಆಶಯದೊಂದಿಗೆ, “ತ್ರಯೋದಶ ಕೋಟಿ ರಾಮತಾರಕ ಮಂತ್ರ ಜಪಯಜ್ಞ” ಕೈಗೊಂಡು, ೨೦೨೩ ರಾಮನವಮೀ ದಿನ, ಶಿರಳಗಿ ಕ್ಷೇತ್ರದಲ್ಲಿ ತಾರಕಮಂತ್ರ ಜಪ ಹವನವನ್ನೂ ಸುಗಮವಾಗಿ ನಿರ್ವಹಿಸಿ ರಾಮಭಕ್ತರ ಆನಂದವನ್ನು ಉನ್ನತ ಮಟ್ಟಕ್ಕೇರಿಸಿದ್ದಾರೆ.